1.09.2008

ನಗು

ನೀನೊಮ್ಮೆ ನಗು
ನಕ್ಕಾಗ ನೀನೊಮ್ಮೆ
ಅರಳುವದು ಇನ್ನೊಂದು ನಗು
ಹಾಗು ಮತ್ತೊಂದು ನಗು
ಹತ್ತು ಹನ್ನೊಂದು ನಗು
ಹಲವಾರು ನಗು
ಹೀಗೆಯೆ ಸಾಗುತ್ತ ನಗು
ಆಗುವದು ಜಗದ ತುಂಬಾ ನಗು

1.08.2008

ಭಾವನೆಗಳು

ಬರೆಯಲಾರದ ಭಾವನೆಗಳು
ತೆರೆ ತೆರೆಯಾಗಿ ಬರಲು
ಹೊರಬರದೆ ತೊಳಲಾಡಿ
ಮನದಲೆ ಬತ್ತುವವು

ಶಬ್ದದಲಿ ಸಿಗದೆ
ಅರ್ಥಗಳು ಜಾರಿ
ಮತ್ತದೆ ಕತ್ತಲೆಯ
ದಾರಿಯಲಿ ಕರಗುವವು

ಘಳಿ ಘಳಿಗೆ ಹುಟ್ಟಿ
ಅರೆಗಳಿಗೆ ಉಳಿದು
ಮರುಘಳಿಗೆ ಅಳಿದು
ತಿಳಿಯಲಾರದೇ ಹೋಗುವವು

೨೧/ಮೇ/೯೭

ಸ್ವಗತ

ಹತ್ತಿರವಿರದ ಎತ್ತರದಲ್ಲಿ
ನನ್ನನ್ನೆತ್ತಿ
ಉತ್ತರ ಕೊಡದೆ ನೀನೆತ್ತ ಹೋಗುವೆ ?

ಒತ್ತರಿಸುವ ದುಃಖದಲ್ಲಿ
ಬತ್ತಿರುವ ಕಣ್ಗಳಲ್ಲಿ
ನೆತ್ತರವ ಕೊಂಡು ತತ್ತರಿಸಿ
ಉತ್ತರವ ಕೊಡದೇ ನೀನೆತ್ತ ಹೋಗುವೆ?

ಅತ್ತಿತ್ತ ಸುತ್ತಮುತ್ತ
ಕತ್ತೆತ್ತಿ ನೋಡಿದರೆ
ಕಂಟಕಗಳ ಕಂಡು
ದಾರಿಯೆತ್ತೆಂದು ಕೇಳಿದರೆ
ಕುತ್ತು ಬಂತೆಂದು
ಉತ್ತರವ ಕೊಡದೆ ನೀನೆತ್ತ ಹೋಗುವೆ?

ಮುತ್ತಂಥ ಮಾತಿನಲಿ
ಹೆತ್ತವರ ಮರೆಯಿಸಿ
ಮತ್ತದೇ ಮಿಥ್ಯದಲಿ
ಸತ್ಯವ ಮುಳುಗಿಸಿದ
ಮಾತೆತ್ತಿದರೆ
ಉತ್ತರವ ಕೊಡದೆ ನೀನೆತ್ತ ಹೋಗುವೆ?


-೨೯/ಅಕ್ಟೋಬರ/೯೪