2.17.2007

ಆಶಾಕಿರಣ

ನಿಂತ ನೆಲ ಕುಸಿದು
ಕಷ್ಟಸಾಗರದಲಿ ತೇಲಿಬಿದ್ದು
ಅತ್ತಿತ್ತ ಅಲುಗಿ, ಎತ್ತಲೋ ಸಾಗುವ
ಹುಟ್ಟು ಹಾಕಿದರೂ ಹಿಮ್ಮೆಟ್ಟುವ
ದೋಣಿಯಲಿ ಕೈಬಿಟ್ಟು
ನಿಂತು ನೋಡಿದರೆ
ಎಲ್ಲೆಲ್ಲೂ ನೀರು ಉಪ್ಪುಪ್ಪು ನೀರು

ಹಣೆಗೆ ಕೈ ಹಚ್ಚಿದಾಗ
ಕಿರಿದಾದ ಕಣ್ಣೆವೆಗಳ ನಡುವೆ
ಎಲ್ಲಿಂದಲೋ ತೂರಿಬರುವ
ಒಂದೇ ಒಂದು ಕಿರಣ
ಇದ್ದದ್ದನ್ನು ಕ್ಷಣಕಾಲ ಮರೆಮಾಚುವ
ಅದು ಮರೀಚಿಕೆಯಾಗಿದ್ದರೂ
ಅದೇ ಕಿರಣ
ಆ ಒಂದೇ ಕಿರಣ ಸಾಕು
ಆಶಾಕಿರಣವದು

2.10.2007

ಚುಟುಕು

ಬಾಳೊಂದು ಕನಸು
ಆದರಿದು ಸೊಗಸು
ಆಗಬೇಕಾದರೆ ಎಲ್ಲರನು ಪ್ರೀತಿಸು
ದೂಷಿಸುವದ ದ್ವೇಷಿಸು
ತಪ್ಪಿತರನು ಮನ್ನಿಸು
ನೀನು ನಕ್ಕು
ಎಲ್ಲರನು ನಗಿಸು

2.07.2007

ಪ್ರಶ್ನೆ

ಎಲ್ಲೆಲ್ಲೂ ಹಸಿರಾಗಿ
ಅಲ್ಲಲ್ಲಿ ಕೆಸರಾಗಿ ಕಾಣುತಿದೆ ಭುವಿಯು
ಹಸಿರು ಕೆಸರಲ್ಲಿ
ಪಸರಿಸಿದ ತರುವೊಂದು
ಸುರಿಸಿದ ಸುಮಗಳಿಗೆ
ಸುತ್ತುತಿದೆ ದುಂಬಿಯು

ಗುಡ ಗುಡನೆ ಗುಡುಗುವ
ಮೋಡವ ಕರೆಯಲು
ಥಕ ಥಕನೆ ಕುಣಿಯುತಿದೆ
ಮೋಡಿಯ ನವಿಲು
ಪಕ್ಕದಲಿ ಬಳಕುತ್ತ
ಥಳಕುತ್ತ ಪುಟಿಯುತ್ತ
ಅಲೆಯಾಗಿ ಸೆಲೆಯಾಗಿ
ಹರಿಯುತಿದೆ ಹೊನಲು

ವರುಷಗಳ ನಂತರ
ಈ ಕವಿತೆ ಓದಿ
ಪುಟಾಣಿ ಮಗುವೊಂದು
ತಂದೆಗೆ ಹೇಳುತಿತ್ತು
ಎಲ್ಲೆಲ್ಲೂ ಹಸಿರಿತ್ತು
ಅಲ್ಲಲ್ಲಿ ಕೆಸರಿತ್ತು
ಕೆಸರಲ್ಲಿ ಪಸರಿಸಿದ
ತರುವಿಗೆ ದುಂಬಿಯಿತ್ತು
ನವಿಲಿತ್ತು ನದಿಯಿತ್ತು
ನೀವು ಉಳಿಸಿದ್ದರೆ
ನಾನೂ ನೋಡಬಹುದಿತ್ತು

ಸಾರಾಂಶ

ಬರಿದಾಗಿ ಧರೆಗೆ ಬಂದು
ಪರಿ ಪರಿಯ ಸಂಸ್ಕಾರ ದೊರೆತು
ಹೊಸದಾದ ವ್ಯಕ್ತಿತ್ವವೊಂದು
ಅರಿಯದೆಯೆ ತಾನಾಗಿ ಬಂತು

ಸರಿ ತಪ್ಪುಗಳಲಿ ಸಿಕ್ಕಿ
ಸಿರಿ ಯಶಗಳ ಹಿಂದೋಡಿ
ಸಿಕ್ಕಿದರೂ ದುಃಖಪಡುವದು
ಅರಿಯದೆಯೆ ತಾನಾಗಿ ಬಂತು

ಬರಿದಾಗಿ ಧರೆಗೆ ಬಂದು
ಬರಿದಾಗಿ ಹೋಗುವೆವೆಂದು
ಅರಿಯದೆಯ ಆರಂಭ ಕೊನೆಯ
ನಡು ನಡುವೆ ಬಡಿದಾಡಿ
ಕಡೆಗೆ ತಡವರಿಸುವುದೆಂತು?