1.06.2022

ಹೀಗೇ ಸುಮ್ಮನೊಮ್ಮೆ

 ಹೀಗೇ ಸುಮ್ಮನೊಮ್ಮೆ 

ಕವಿತೆಯೊಂದು ಬರೆದುಬಿಡೋಣವೆಂದುಕೊಂಡೆ

ಪೆನ್ನೊಂದ ಹುಡುಕಿಕೊಂಡು ಮನೆಯೆಲ್ಲ ಅಲೆದೆ

ಸಿಕ್ಕ ಕೆಲವು ಮಸಿ ಖಾಲಿ , ಮಿಕ್ಕವು ಮುರಿದವು

ಮಗಳ ಪೆನ್ಸಿಲ್ ಕಡ್ಡಿಯನೇ ಜೊಡಿಸಿದೆ

ಕಾಗದವೆಲ್ಲಿ ? ಬರೀ ಬಿಲ್ಲುಗಳು ನ್ಯೂಸ ಪೇಪರ್ಗಳು

ಜಾಹೀರಾತಿನ ಹಿಂದಿನ ಹಾಳೆ ಜೋಡಿಸಿಕೊಂಡೆ

ಪೆನ್ನು ಬೇಡ ಕಾಗದ ಬೇಡ

ಮೊಬೈಲ್ ಕೀಲಿಸಿಬಿಡೋಣವೆಂದುಕೊಂಡೆ

ಇನ್ನೇನು ಬರೆದೆ ಬಿಡುವೆ

ಅಯ್ಯೋ ನೆನಪಾಯಿತು

ಒಲೆಯಮೇಲೆ ಹಾಲುಕಾಯಲುಂಟು

ಇನ್ನೇನು ಉಕ್ಕಿಬಿಡುವದೆಂದು ಓಡಿ ಹೋಗಿ ಉರಿ ಆರಿಸಿಬಂದೆ

ಇನ್ನೇನು ಬರೆದೇ ಬಿಡುವೆ

ಕರೆಗಂಟೆ ಕೂಗಿತು , 

ಅಮೆಜಾನ್ ಅವತಾರಿ ಪೊಟ್ಟಣವ ನೀಡಿದ

ಅದನಿಟ್ಟು ಕೊರೊನ ಶಿಷ್ಟಾಚಾರ ಮುಗಿಸಿಕೊಂಡೆ

ಇನ್ನೇನು ಬರೆದೇ ಬಿಡುವೆ

ಮೊಬೈಲು ಉಲಿಯಿತು

ಅದಕೆ ಕಿವಿಗೊಟ್ಟು ಜಾಹೀರಾತು ಕೇಳಿಸಿಕೊಂಡೆ

ಇನ್ನೇನು ಬರೆದೇ ಬಿಡುವೆ

ಒಮ್ಮಿಂದೊಮ್ಮೆಲೆ ಮಳೆ

ಅಯ್ಯೋ ಹಾಕಿರುವ ಬಟ್ಟೆ ತೊಯ್ದಾವು

ಓಡಿ ಹೋಗಿ ಒಳಗೆ ಗುಡ್ಡೆ ಹಾಕಿದೆ

ಇನ್ನೇನು ಬರೆದೇ ಬಿಡುವೆ

ಮತ್ತೆ ಕರೆಗಂಟೆ ಕರೆಯಿತು

ಅಕ್ಕ ಇವತ್ತು ಬೇಗ ಬಂದೆ ಎಂದಳು ನನ್ನ ಮನೆಯ ಸಹಾಯಕಳು

ಅವಳ್ಹೋದ ಮೇಲೆ ಕೊಂಡಿ ಹಾಕಿಕೊಂಡೆ

ಇನ್ನೇನು ಬರೆದೇ ಬಿಡುವೆ

ಗಮನ ಗಡಿಯಾರದ ಮೇಲೆ

ಅಯ್ಯೋ ಮಕ್ಕಳು ಹಸಿದು ಬಂದಾರು

ತಿನ್ನಲೇನು ಮಾಡಲೆಂದು ಅಡುಗೆ ಮನೆಗೆ ಹೋದೆ


ಇನ್ನೇನು ಬರೆವೆ ?ಬಿಡುವೇ ಇಲ್ಲದೆ ಬಿಡುವೆ






No comments: