2.15.2008

ಮತ್ತೆ ಮಳೆ ಸುರಿಯಿತು

ಒಮ್ಮೆಲೆ ಮಳೆ ಶುರುವಾದದ್ದನ್ನು ನೋಡಿ ಅಡಿಗೆ ಮನೆಯಲ್ಲಿದ್ದ ಶಾರದಾ ತಕ್ಷಣ ಹಿತ್ತಲಿಗೆ ಓಡಿದಳು.ಒಣಗಿದ್ದ ಬಟ್ಟೆಗಳನ್ನು ಸರಸರನೇ ಹಗ್ಗದಿಂದ ತೆಗೆದು ಕೈಮೇಲೂ, ಹೆಗಲಮೇಲೂ, ಹಾಕಿಕೊಂಡು ಒಳಗೋಡಿದಳು.ಬಟ್ಟೆಗಳನ್ನೆಲ್ಲಾ ಸೋಫಾದ ಮೇಲೆ ಹಾಕಿ, ಸುಸ್ತಾಗಿ ಅಲ್ಲೇ ಕುಸಿದಳು.ಛೇ! ಹೀಗೆ ಮಳೆ ಒಮ್ಮೆಲೆ ಬಂದುಬಿಡಬೇಕೆ?ಒಣಗಿದ ಬಟ್ಟೆಯೆಲ್ಲ ಮತ್ತೆ ಒದ್ದೆಯಾಯ್ತು ಎಂದುಕೊಂಡಳು.ಎದುರಿನ ಕಿಡಕಿಯಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದುದು ಕಾಣುತ್ತಿತ್ತು.ಈ ಮಳೆಗೆ ಬೇಜಾರುಪಟ್ಟಿದುದು ನಾನೇನಾ?ಕಿಡಕಿಯ ಹತ್ತಿರಹೋಗಿ ಅದರ ಸರಳುಗಳ ಮಧ್ಯೆ ಮುಖವಿಟ್ಟು ಮಳೆಯನ್ನೇ ನೋಡತೊಡಗಿದಳು.ಇದೇ ಮಳೆಗಾಲಕ್ಕಲ್ಲವೇ ಹಿಂದೆ ನಾನು ವರ್ಷವಿಡೀ ಕಾಯುತ್ತಿದ್ದುದು? ಇದೇ ಮೊದಲ ಮಳೆಯನ್ನು ನೋಡಿಯಲ್ಲವೇ ಮನಸ್ಸು ಹುಚ್ಚೆದ್ದು ಕುಣಿಯುತ್ತಿದ್ದುದು.ಇದೇ ಮಳೆಯನ್ನು ನೋಡಿಯಲ್ಲವೇ ಪುಟಗಟ್ಟಲೇ ಗೀಚುತ್ತಿದ್ದುದು? ಹಾಡು ಬರೆಯುತ್ತಿದ್ದುದು? ಈಗೇನಾಗಿದೆ ನನಗೆ? ಈ ಮಳೇಯನ್ನು ನೋಡಿ ಬರೆಯುವ ಹುಮ್ಮಸ್ಸು ಇಮ್ಮಡಿಯಾಗುತ್ತಿತ್ತು.ಅದು ಆ ಎಳೆಯ ವಯಸ್ಸಿನ ಮನಸ್ಸು. ಮಳೆಯನ್ನು ನೋಡಿ ಈಗಲೂ, ಈ ಐವತ್ತರ ಅಂಚಿನಲ್ಲಿ ಅಂಥಹುದೇ ಭಾವನೆಗಳು ಹುಟ್ಟಲೆಂದು ಅದೇಕೆ ನನು ಬಯಸುತ್ತೇನೆ? ಬಹುಶಃ ಮನು ನಿನ್ನೆ ಹೇಳಿದ ಮಾತಿನ ಪ್ರಭಾವವಿದ್ದಿರಬಹುದು.ನಿನ್ನೆ ಸಹನಾಳನ್ನು ಪುಣೆಯ ಬಸ್ಸು ಹತ್ತಿಸಿ ಬಂದು ಮಂಕಾಗಿ ಕುಳಿತಿದ್ದ ನನ್ನನ್ನು ನೋಡಿ ಮನು ಹೇಳಿದ್ದರು. "ಶಾರೂ, ಇನ್ನು ಸಹನಾ, ಭುವನಾರು ತಮ್ಮ ತಮ್ಮ ದಾರಿಯರಸಿ ಹೋಗುವವರು. ನಿನಗೆ ಜವಾಬ್ದಾರಿಗಳು ಕಡಿಮೆಯಾಗುವವು.ಬೇರೆಯೇನೂ ಯೊಚನೆ ಮಾಡದೇ, ಬಿಟ್ಟು ಹೋದ ನಿನ್ನ ಬರೆಯುವ ಹವ್ಯಾಸ ಮುಂದುವರೆಸು." ಸಂಜೆ ಹೊರಗೆ ಹೋಗಿ ಒಂದು ಕಟ್ಟು ಬಿಳೀ ಹಾಳೆ ಮತ್ತು ಹೊಸ ಪೆನ್ನು ತಂದು ಇಟ್ಟಿದ್ದರು. ನೀವೇನೋ ಹೇಳ್ತೀರಾ, ಆದರೆ ನಾನು ಬರೆಯುತ್ತೇನೆಂಬ ವಿಶ್ವಾಸ ನನ್ನಲ್ಲಿರಬೇಕಲ್ಲಾ? ಎಂದಿದ್ದೆ. ಹಿಂದೆ ಇಂತಹ ವಿಶ್ವಾಸಕ್ಕೆ ಕೊರತೆಯೇನು ಇರಲಿಲ್ಲಾ.ಯೋಚನೆ ಮಾಡದೇನೇ ಮನಸ್ಸಿಗೆ ಹೊಳೆದ ಕವಿತೆಯ ಸಾಲುಗಳನ್ನು ಹಾಳೆ ಪೆನ್ನು ಕೈಯಲ್ಲಿದ್ದರೆ ಬರೆಯುತ್ತಿದ್ದೆ. ಚಿಕ್ಕವಳಿದ್ದಾಗ ನಾನು ಕವಿತೆ ಬರೆಯುವದು ಅಮ್ಮನಿಗೆ ಮಾತ್ರ ಗೊತ್ತಿತ್ತು. ಒಂದು ದಿವಸ ಅಜ್ಜಿಯ ಹಳ್ಳಿಗೆ ಹೋಗಿದ್ದಾಗ ಮಳೆ ಬಂದಿತ್ತು. ಎಲ್ಲೆಲ್ಲೂ ಮಣ್ಣಿನ ಕಂಪು.ಗೋಡೆಯೂ ಮಣ್ಣಿನದ್ದಾದ್ದರಿಂದ ಅದೂ ಕಂಪು.ಎಲ್ಲಿ ಅಡಗಿದ್ದವೋ ಕವಿತೆಯ ಸಲುಗಳು , ಪಟ ಪಟನೆ ಬರತೊಡಗಿದವು.ಎಲ್ಲರ ಮುಂದೆ ಬರೆಯಲು ನಾಚಿಕೆಯಾಗಿ ಮಾಳಿಗೆ ಏರಿದ್ದಾತು.ನಾಲ್ಕು ಕವಿತೆಗಳು ಸಾಲಾಗಿ ಮೂಡಿದವು.ಕೆಳಗಿಳಿದು ಬಂದ ಮೇಲೆ ಅಮ್ಮ ಕೆಳಿದ್ದು " ಎಲ್ಲಿದ್ದೆ ಇಷ್ಟೊತ್ತು? " "ಅಮ್ಮ ನಾಲ್ಕು ಕವಿತೆ ಬರೆದೆ". "ಎಲ್ಲಿತೋರಿಸು? " ಎಂದು ಅಮ್ಮಕೇಳಿದಾಗ ಹೇಳಿದ್ದೆ "ಕೊನೆಯ ಕವಿತೆ ಆಕಾಶದಲ್ಲಿ ಹಾರಾಡ್ತಿದ್ದ ಹಕ್ಕಿ ನೋಡಿ ಬರೆದಿದ್ದೆ.ತುಂಬ ಖುಶಿಯಾಯ್ತು.ಎಲ್ಲಾ ಹಾಳೆನೂ ಗಾಳೀಲಿ ಹಾರಿ ಬಿಟ್ಟೆ. " ಅಮ್ಮ "ಹುಚ್ಚು ಹುಡುಗಿ" ಎಂದಳಷ್ಟೆ.ಅದೇ ವರುಷ ನಡೆದ ಪ್ರಸಂಗವೊಂದರಿಂದ ಶಾಲೆಯಲ್ಲಿ ಎಲ್ಲರಿಗೂ ನಾನು ಕವಿತೆ ಬರೆಯುವದು ಗೊತ್ತಾಗಿಬಿಟ್ಟಿತ್ತು.ಕುಲಕರ್ಣಿ ಮಾಸ್ತರು ಶಾಲೆಗೆ ಹತ್ತಿರದ ಪ್ರಾಣಿಸಂಗ್ರಹಾಲಯಕ್ಕೆ ನಮ್ಮ ವರ್ಗದವರನ್ನು ಕರೆದುಕೊಂಡು ಹೋಗಿದ್ದರು.ಆವತ್ತೂ ಇಂಥಹುದೇ ಮಳೆಗಾಲದ ಒಂದು ದಿನ. ಅಲ್ಲಿದ್ದ ನವಿಲಿನ ಹಿಂಡಿನಲ್ಲಿ ಒಂದು ನವಿಲು ಗರಿಗೆದರಿತು. ಆಗಲೇ ಒಂದು ಕವಿತೆ ಹುಟ್ಟಿ ಬಂತು. ಮರುದಿವಸ ಶಾಲೆಯಲ್ಲಿ ಗೆಳತಿಯರೆಲ್ಲ ಧಾಟಿ ಸೇರಿಸಿ ಅದನ್ನು ಹಾಡತೊಡಗಿದೆವು.

ನವಿಲೆ ನವಿಲೆ ನರ್ತಿಸು
ನನಗೂ ನೃತ್ಯ ಕಲಿಸು

ಬಣ್ಣ ಬಣ್ಣದ ಗರಿ
ಗರಿಯ ಕಣ್ಣು ಕರಿ

ಗರಿಯ ಕೆದರಿ ನಿಲ್ಲು
ಎಲ್ಲರ ಮನ ಗೆಲ್ಲು

ನಿನ್ನ ನೃತ್ಯ ಸೊಗಸು
ಧ್ವನಿ ಮಾತ್ರ ಗಡಸು

ಹೀಗೇ ಸಾಗಿತ್ತು ಆ ಹಾಡು. ಈ ಗದ್ದಲದಲ್ಲಿ ಬೆಲ್ ಆಗಿ ಕುಲಕರ್ಣಿ ಮಾಸ್ತರು ಒಳಗೆ ಬಂದದ್ದೂ ಗೊತ್ತಾಗಿರಲಿಲ್ಲ. ಮಾಸ್ತರರು ಗದರಿದ್ದರು " ಏನ್ ಮಾಡ್ತಿದೀರ? " ಎಲ್ಲರೂ ಹೆದರಿ ಕಂಗಾಲಾದೆವು.ವೇದಾ ಹೇಳಿದಳು. "ಶಾರದಾ ಹೇಳಿದ ನವಿಲಿನ ಹಾಡು ಹೇಳ್ತಿದೀವಿ"". ಮಾಸ್ತರರು ನಾನು ಕವಿತೆಗಳೆನ್ನೆಲ್ಲ ಬರೆದಿಟ್ಟಿದ್ದ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದರು. ಅದೇ ದಿವಸ ಮಧ್ಯಾನ್ಹ ತಮಗೆ ಇಷ್ಟವಾದದ್ದೆಂದು ಮಳೆಯ ಮೇಲಿನ ಒಂದು ಕವಿತೆಯನ್ನು ಆ ಪುಸ್ತಕದಿಂದ ರಾಗವಾಗಿ ಇಡೀ ಕ್ಲಾಸಿಗೆ ಓದಿ ಹೇಳಿದ್ದರು.ಈ ಬಾರಿ ಊರಿಗೆ ಹೋದಾಗ ಪೇಟೆಯಲ್ಲಿ ಸಿಕ್ಕಿದ್ದ ಕುಲಕರ್ಣಿ ಮಾಸ್ತರು ಹೇಳಿದ್ದು ಅದನ್ನೇ " ಏಕೆ ಬರೆಯುವದನ್ನು ಬಿಟ್ಟುಬಿಟ್ಟೆ ಶಾರದಾ? ಅದು ಎಲ್ಲರಿಗೂ ಬರುವ ಕಲೆಯಲ್ಲ.ಈಗಲೂ ಲೇಟಾಗಿಲ್ಲ, ಬರೆಯಲು ಪ್ರಯತ್ನಿಸು ".
ಯಾವಾಗ ಬರೆಯುವದು ಬಿಟ್ಟುಹೋಯಿತೋ ಗೊತ್ತು ಕೂಡ ಆಗಲಿಲ್ಲ.ಕಾಲೇಜು ಮುಗಿಸಿದ ಸ್ವಲ್ಪೇ ದಿನಗಳಲ್ಲಿ, ಬ್ಯಾಂಕ್‌ನ ಉದ್ಯೋಗದಲ್ಲಿದ್ದ ಮನೋಹರರೊಂದಿಗೆ ಮದುವೆಯಾಗಿದ್ದು. ಮುಂದೆ ಭುವನಾ , ಸಹನಾ ನಮ್ಮ ಜೀವನದಲ್ಲಿ ಬಂದದ್ದು.ಅವರ ಸ್ಕೂಲು ,ಯಾವದ್ಯಾವದೋ ಕ್ಲಾಸುಗಳು.ಚುರುಕಾಗಿದ್ದ ಇಬ್ಬರೂ ಕಂಡದ್ದನ್ನೆಲ್ಲ ಕಲಿಯಬೇಕೆನ್ನುವವರು.ಇವರು ಕಲಿಯಬೇಕೆಂದಿದ್ದನ್ನೆಲ್ಲಾ ಕಲಿಸುವ ಮನೋಹರರು. ಅಪ್ಪನ ಮಕ್ಕಳಾಗಿಯೇ ಬೆಳೆದರು , ಸಹನಾ ಮತ್ತು ಭುವನಾ. ನಾನೇನು ನೌಕರಿ ಮಾಡುವ ಪ್ರಮೇಯ"ರಲಿಲ್ಲ. ಹಾಗೆಂದು ಬಿಡುವೇನೂ ಇರಲಿಲ್ಲ.ಮನೆಯ ಕೆಲಸವೇ ಬಹಳ.ಈಗ ಭುವನಾ MSc ಮಾಡಿ administration service ನ ಪರೀಕ್ಷೆ ಪಾಸು ಮಾಡಿ ಸರಕಾರಿ ಅಧಿಕಾರಿಯಾಗಿ ಹಾಸನದಲ್ಲಿದ್ದಳು.ಸಹನಾಗೆ ರಿಸರ್ಚ್‌ನಲ್ಲಿ ಆಸಕ್ತಿ. Phd ಮಾಡಿ ನಿನ್ನೆ ತಾನೇ ಪುಣೆಯ ಯುನಿವರ್ಸಿಟಿಯ ಪ್ರೊಫೆಸರ್ ಹುದ್ದೆಗೆ ಸೇರಿಕೊಂಡಳು.ಈಗ ಮನೆಯಲ್ಲಿ ನಾನು ಮತ್ತು ಮನು ಮಾತ್ರ.
ಯಾಕೋ ಹಳೆಯ ಡೈರಿ ತೆಗೆದು ಓದಬೇಕೆನಿಸಿತು. ಪುಟಗಳನ್ನು ತಿರುವುತ್ತಿದ್ದಾಗ ಮಳೆಯ ಬಗ್ಗೆ ಬರೆದ ಒಂದು ತಿಪ್ಪಣಿ ಕಣ್ಣಿಗೆ ಬಿತ್ತು.

"ಮಳೆ, ಕೋಟಿ ಕೋಟಿ ಹನಿಗಳ ಪತನದಿಂದಾದುದು.ಮಳೆ, ಅದೇ ಮಳೆ ಯಾವುದರ ಸ್ಪರ್ಶ ಮಾತ್ರದಿಂದ ಭೂಮಿ ತಂಪಾಗಿ ಕಂಪು ಬೀರುವದೋ ಅದೇ ಮಳೆ.ಪ್ರಕೃತಿಯ ಚಮತ್ಕಾರ! ತಂಪಾದ ಗಾಳಿ ಮಳೆಯ ಹನಿಯೊಂದಿಗೆ ಸ್ಪರ್ಶಿಸಿದಾಗ ಅದೆಂತಹದೋ ಆನಂದ. ಸುರಿಯುವ ಮಳೆ ತನ್ನೊಂದಿಗೆ ಭಾವನೆಗಳ ಮಹಾಪೂರವನ್ನೇ ತಂದಂತೆನಿಸುವದು.ನೆನಪುಗಳ ಹನಿಗಳು ಒಂದೊಂದೇ ಭೂಮಿಯಲ್ಲಿ ಬಿದ್ದು, ಕರಗಿ, ಭೂಮಿಯ ಹಸಿವು ಇಂಗಿ, ಸಣ್ಣ ತೊರೆಯಾಗಿ ಹರಿಯುವವು.ತಂಗಾಳಿಯ ಅಲೆಗಳು ಹೃದಯದಾಳದ ಬಾಗಿಲು ತಟ್ಟಿದಂತೇ, ಅದಕ್ಕಾಗಿಯೇ ಕಾಯುತ್ತಿದ್ದ ಭಾವನೆಗಳಿಗೆ, ಒಮ್ಮೆಲೆ ಹೊರಬರುವ ಆತುರ.ಮನಸ್ಸಿಗೆ ಭಾವನೆಗಳನ್ನು ಅರಿಯಲಾರದ ತೊಳಲಾಟ.ಅದೇ ಮನಸ್ಸಿಗೆ ಅದೆಂತಹದೋ ಆನಂದ, ಪರಮಾನಂದ.ಪ್ರಕೃತಿಯನ್ನು ಮರೆಯಲು ಹೊರಟ ಮನುಜನಿಗೆ ತನ್ನ ಪ್ರಾಬಲ್ಯದ ಒಂದೇ ಒಂದು ಹೊಡೆತದಿಂದ ಆತನನ್ನು ಮಳೆ ದಂಗುಬಡಿಸುವದು. "ನೀನು ತಡೆಯಲಾರೆ " ಎಂದು ಆತನಿಗೆ ಹೇಳಿ, ಹಾಸ್ಯವಾಡಿ, ಮನುಷ್ಯನಿಗೆ ಅವನ ವಸ್ತುಸ್ಥಿತಿಯನ್ನು ತೋರುತ್ತ,ಮಳೆ ಸುರಿಯುವದು, ಸುರಿಯುತ್ತಲೇ ಇರುವದು, ಕೋಟಿ ಕೋಟಿ ವರ್ಷಗಳಿಂದ, ಕೋಟಿ ಕೋಟಿ ಹನಿಗಳಿಂದೊಡಗೂಡಿ, ಜೀವನದ ರಸಗಂಗೆಯನ್ನು ತನ್ನೊಂದಿಗೆ ಹರಿಸುತ್ತ ,ಸಸ್ಯರಾಶಿಗೆ ಜೀವ ಕೊಟ್ಟು ,ತನ್ಮೂಲಕ ಮಾನವನಿಗೆ ಜೀವಿಸಲು ಸ್ಪೂರ್ತಿನೀಡುವ ಮಳೆ.ಮಳೆ ಅದ್ಭುತವೇ ಸರಿ. "

ಓಹ್ ! ಈಗ ಮತ್ತೆ ಮಳೆ ಸುರಿಯುತ್ತಿದೆ!!. ಶಾರದಾ ಪೆನ್ನು ಹಾಳೆಗಳನ್ನು ಕೈಗೆತ್ತಿಕೊಂಡಳು.

ಎಲ್ಲಿ ನೀ ಮರೆಯಾದೆ?
ಓ ನನ್ನ ಕವಿತೆ
ಎಲ್ಲೆಲ್ಲೂ ಹುಡುಕಿರುವೆ
ಮನದ ಮೂಲೆ ಮೂಲೆಯಲ್ಲಿ
ಭಾವನೆಗಳ ಅಡಿಯಲ್ಲಿ
ನವರಸಗಳ ಮಧ್ಯದಲ್ಲಿ
ಈಗ
ಮತ್ತೆ ಮಳೆ ಸುರಿಯುತಿದೆ
ನೀ ಬಾ
ಮತ್ತದೇ ರೂಪದಲಿ
ಅಂತರಂಗದ ಗೆಳತಿಯಾಗಿ
ನೀ ಬಾ
ರಂಗುರಂಗಿನ ತರಂಗವನೆಬ್ಬಿಸಿ
ನನ್ನ ಸ್ಪೂರ್ತಿಯ ಸೆಲೆಯಾಗಿ
ನೀ ಬಾ
ಮತ್ತೆ ಮಳೆ ಸುರಿಯುತಿದೆ.

No comments: