2.16.2008

ಬರೆಯುವದರ ಬಗ್ಗೆ ಬರೆದುದು

ನಿನ್ನೆ ರಾತ್ರಿ ತುಂಬಾ ಕ್ಲಿಷ್ಟಕರವಾದ ವಿಚಾರಗಳನ್ನೊಳಗೊಂಡ ಪ್ರಬಂಧವೊಂದನ್ನು ಓದುತ್ತಿದ್ದೆ. ತುಂಬಾ ಜಟಿಲವಾದ ವಿಚಾರಗಳಾದರೂ ಲೇಖಕರು ಅರ್ಥವಾಗುವಂತೆ ಬರೆದಿದ್ದರು. ನನಗೆ ಮಧ್ಯ ಮಧ್ಯದಲ್ಲಿ ಓದುವದನ್ನು ನಿಲ್ಲಿಸಿ, ವಿಷಯವನ್ನು ಅರಗಿಸಿಕೊಂಡು ಮುಂದುವರೆಯಬೇಕಿತ್ತು. ಇಂತಹ ಒಂದು ವಿರಾಮದಲ್ಲಿ ನನ್ನದೇ ಆದ ವಿಚಾರ ತೇಲಿ ಬಂತು.ತನ್ನ ತಲೆಯಲ್ಲಿ ಹುಟ್ಟಿದ ವಿಚಾರವನ್ನು, ಓದುಗನ ತಲೆಯಲ್ಲಿ ಅಷ್ಟೇ ಕರಾರುವಾಕ್ಕಾಗಿ ಅದೇ ವಿಚಾರವನ್ನು ಹುಟ್ಟಿಸುವಂತೆ ಬರೆಯುವದು ಎಷ್ಟೊಂದು ಕಷ್ಟವೆಂಬುದು.

ಒಮ್ಮೆ ಯೋಚಿಸಿ ನೋಡಿ; ವಿಚಾರಗಳಿಗೆ ಭಾಷೆರುವುದಿಲ್ಲ. ಅವು ಮೆದುಳಿನಲ್ಲಿ ಹುಟ್ಟಿದ ಭಾವನೆಗಳು ಮಾತ್ರ, ಒಂದು ತರಹದ 'pulse' ಗಳೆನ್ನಿ. ನೀವು ಒಂದು ನಿಮಿಷ ಯೋಚನೆಯಲ್ಲಿ ನಿಂತಾಗ ಮಾತ್ರ ಒಂದು ಭಾಷೆಯಲ್ಲಿ ಯೋಚಿಸಲು ಸಾಧ್ಯ.ಇಲ್ಲವಾದರೆ ನಿರಂತರವಾಗಿ ಹರಿದುಬರುವ ವಿಚಾರ ತರಂಗಗಳಿಗೆ ನನ್ನ ಅಭಿಪ್ರಾಯದಲ್ಲಿ ಭಾಷೆರುವುದಿಲ್ಲ. ಮನಸ್ಸಲ್ಲಿ ಹುಟ್ಟಿದ ಇಂತಹ ಪಲ್ಸ್ ಗಳನ್ನು ಭಾಷೆಯ ಮೂಲಕ ಬರೆದು, ಅದನ್ನು ಓದುಗನು ಓದಿದಾಗ ಅದೇ ರೀತಿಯ ಪಲ್ಸ್ ಗಳನ್ನು ಹುಟ್ಟಿಸಬೇಕು.ಇದನ್ನು ಬರೆದಂತೆ ನನಗೆ ಇದೀಗ ಅನಿಸುತ್ತಿರುವುದೆಂದರೆ ಸಂಶೋಧನೆ ಮಾಡಿದರೆ ಇದನ್ನು scientific model ಮಾಡಿ ಗಣಿತದ ಸೂತ್ರವನ್ನೂ ಬರೆಯಬಹುದೆಂದು. ಈ ಬಗ್ಗೆ ಸಂಶೋಧನೆಗಳು ಖಂಡಿತ ನಡೆದಿರಬಹುದು.


ಲೇಖಕನು ಬರೆಯುವಾಗ ವಿಚಾರಗಳು ನಿರಂತರವಾಗಿ ಹರಿದು ಲೇಖನಿಂದ ಶಾಯಿಯಾಗಿಳಿದು ಹಾಳೆಯ ಮೇಲೆ ಮೂಡಿ ಬರಬೇಕು.ಸರಿಯಾದ ಅರ್ಥಕೊಡುವ ಪದಗಳು ಬೇಕಾದ ಸಮಯದಲ್ಲಿ ದೊರಕಬೇಕು. ಶಬ್ದಕ್ಕಾಗಿ ತಡಕಾಡುತ್ತಾ ನಿಂತರೆ ವಿಚಾರದ ಕೊಂಡಿ ಕಳಚುವದು. ಇದು ಅಷ್ಟು ಸರಳವಲ್ಲ. ಕಥೆಗಾರರಾದರೆ ಇದಿಷ್ಟೇ ಅಲ್ಲದೇ ಪಾತ್ರಗಳ ತಲೆ ಹೊಕ್ಕು ಅದರ ವಿಚಾರವನ್ನೂ ತಾನೇ ಪಾತ್ರಧಾರಿಯಾಗಿಮಾಡಬೇಕು.ಎಷ್ಟೋ ಬರಹಗಾರರು ತಮ್ಮದೇ ಆದ ವಿಚಾರಗಳನ್ನು ಪಾತ್ರಗಳ ಮೂಲಕ ಹೇಳಿಸುತ್ತಾರೆ. ತಮಗೆ ಸರಿಯೆನಿಸಿದ ಕೊನೆಯನ್ನು ಕಥೆಗೆ ನೀಡುತ್ತಾರೆ. ಇನ್ನೂಕೆಲವರು ಅಂತ್ಯವನ್ನು ಓದುಗರಿಗೆ ಬಿಟ್ಟುಬಿಡುತ್ತಾರೆ. ಇಂಥವುಗಳನ್ನು ಓದಿದಾಗಲೆಲ್ಲ ತಳಮಳವಾಗುವದು. ಬಹಳಷ್ಟು ಭಾರತೀಯ ಲೇಖಕರು ಒಂದು ಮೌಲ್ಯವನ್ನು ಆಧರಿಸಿ ಅಂತ್ಯವನ್ನು ನಿಗದಿಪಡಿಸುತ್ತಾರೆ. ಸಂಸ್ಕೃತದ ಪ್ರಭಾವವೇನೋ, ಬಹುಶ: ಸುಖಾಂತ್ಯಗಳೇ ಜಾಸ್ತಿ. ಅಂತ್ಯಕ್ಕಿಓತಲೂ ಪ್ರಮುಖವಾಗಿ, ಅಂತ್ಯದವರೆಗೂ ಓದುಗನ ಮನಸ್ಸನ್ನು ಹಿಡಿದಿದುವಂತೆ ಸ್ವಾರಸ್ಯವಾಗಿ ಬರೆಯುವದು ಒಂದು ಕಲೆ.

ಇಲ್ಲಿಯವರೆಗೂ ವಿಜ್ಞಾನವು law of conservation of enegy ಯನ್ನು ಒಪ್ಪಿಕೊಂಡಿದೆ. ಶಕ್ತಿಯನ್ನು ಸೃಷ್ಟಿಸಲಾಗದು ಮತ್ತು ನಾಶಪಡಿಸಲಾಗದು. ಈ ತತ್ವವು ಭೌತಿಕವಾಗಿ ಇರುವಂತಹ ಶಕ್ತಿಗೆ ಸಂಭಂದಿಸಿದ್ದು. ಇದು ಅಭೌತಿಕ ಶಕ್ತಿಗಳಿಗೂ ಅನ್ವಯಿಸಬಾರದೇಕೆ? ಉದಾಹರಣೆಗೆ ವಿಚಾರಗಳನ್ನೇ ತೆಗೆದುಕೊಳ್ಳಿ.ಒಂದು ವಿಚಾರ ಯಾವುದೋ ಪೂರ್ವಗ್ರಹಿಕೆಗಳಿಂದ ಒಂದು ತಲೆ/ಮೆದುಳಿನಲ್ಲಿ ಹುಟ್ಟುತ್ತದೆ. ಅದು ದೃಶ್ಯ, ಶ್ರಾವ್ಯ ಅಥವಾ ಇನ್ನಿತರ ಮಾಧ್ಯಮಗಳ ಮೂಲಕ ಹರಿದು ಮುಂದೆ ಸಾಗುತ್ತದೆ.ಇನ್ನೊಬ್ಬರ ತಲೆ/ಮೆದುಳನ್ನು ಹೊಕ್ಕು ತನ್ನ ಪ್ರಭಾವವನ್ನು ಬೀರುತ್ತದೆ. ಯೋಚನೆಗಳಿಗೂ ವಿಚಾರಗಳಿಗೂ ಶಕ್ತಿಯುಂಟು. ಒಂದು ಮಟ್ಟಿಗೆ ಭೌತಿಕ ಶಕ್ತಿಗಿಂತ ಹೆಚ್ಚು. ಆದ್ದರಿಂದಲೇ ಅಲ್ಲವೇ ಕ್ರಾಂತಿಕಾರಿ ವಿಚಾರಗಳು ಲಕ್ಷ ಲಕ್ಷಗಟ್ಟಲೇ ಜನರನ್ನು ಬಡಿದೆಬ್ಬಿಸುವದು. ಲೇಖಕನಿಗೆ ಇಂತಹ ವಿಚಾರಗಳನ್ನು ಚಾಕಚಕ್ಯತೆಂದ ಸರಳವಾಗಿ ಪ್ರಸರಿಸುವ ಶಕ್ತಿ ಇರುವದು. ಆದ್ದರಿಂದಲೇ"pen is mightier than sword" ಎನ್ನುವದು.

1 comment:

Elion said...

Hi,
these poems are really excellent and not less than any professional poet.
Keep it up.