2.17.2008

ಬರವನ್ನು ಕಾಯ್ದು

ಕವಿತೆ ಹುಟ್ಟುತ್ತಿಲ್ಲ
ಹೌದು
ಈ ಹಿಂದೆ ಸುಮ್ಮನೇ ಹುಟ್ಟುತ್ತಿದ್ದುದು
ಮನಸಲ್ಲಿ ಚಿಗುರಿ
ಹೂವಂತೆ ಬಿರಿದು ನಿಂತಹುದು
ಈಗ ಅರಳುತ್ತಿಲ್ಲ


ಯಾಕೆ? -ನನ್ನನ್ನು ನಾನೇ ಕೇಳುತ್ತೇನೆ
ಕಲ್ಲಲ್ಲಿ ಹೂ ಅರಳುವದುಂಟೇ?
ಹೌದು
ಮನಸು ಕಲ್ಲಾಗಿದೆ
ಯಾಂತ್ರಿಕತೆಗೆ ಸಿಕ್ಕು,
ಬಾಡಿ ಬರಡಾಗಿ ಕಲ್ಲಾಗಿ ಹೋಗಿದೆ

ನೀನು ನೀನಾಗಿಲ್ಲ- ಹಲವರು ಹೇಳುತ್ತಾರೆ
ನೀನು ಕಳೆದುಹೋಗಿರುವೆ.
ಹೌದು
ನಾನು ಕಳೆದು ಹೋಗಿದ್ದೇನೆ
ನನ್ನ ಕವಿತೆಯೂ ಹಾಗೆಯೇ
ಅಥವಾ ನನ್ನ ಕವಿತೆಯ ಹಾಗೆ ಕಳೆದುಹೋಗಿದ್ದೇನೆ
ಅಲ್ಲ
ನಾನು ಕಳೆದಿದ್ದರಿಂದ ಕವಿತೆ ಕಳೆದಿದೆ


ನಿನಗೆ ವಿಶ್ವಾಸವಿಲ್ಲ - ಗೆಳೆಯ ಹೇಳುತ್ತಾನೆ
ಹೌದು
ಅದಕ್ಕೇ ಇದನ್ನು ಕೊನೆಯ ಪುಟದಲ್ಲಿ ಬರೆಯುತ್ತಿದ್ದೇನೆ
ಪ್ರಯತ್ನಿಸು - ನನ್ನಮ್ಮ ಹೇಳುತ್ತಾಳೆ
ಯತ್ನಿಸಿದ್ದೇನೆ, ನೋಡಿ ಈ ಪದ್ಯ
ಪದ್ಯವೇ ಇದು?- ನೀವು ಎನ್ನುತ್ತೀರಿ
ಗದ್ಯದಂತಿದೆ
ಹೌದು
ಇದು ಕಲ್ಲಲ್ಲಿ ಚಿಗುರಿಸುವ ಒಂದು ಯತ್ನ
ಹೌದು
ಈಗಲೂ ಕಾಯುತ್ತಿದ್ದೇನೆ- ಕಳೆದುಹೋದ ಕವಿತೆಗಾಗಿ, ನನಗಾಗಿ

No comments: