2.13.2008

ಒಬ್ಬ ಉಮಾ

ಸಾಲಿಯಿಂದ ಬಂದ ಪಾಟೀಚೀಲ ಗೂಟಕ್ಕ ಹಾಕಿ ಉಮ್ಮಿ ತನ್ನವ್ವನನ್ನು ಹುಡುಕುತ್ತ ಹಿತ್ತಲಿಗೆ ನಡೆದಳು.ಹಿತ್ತಲಲ್ಲಿ ಬಣವೆಯ ಪಕ್ಕ ಕೂತುಕೊಂಡು ಗಂಗವ್ವ ಕುಳ್ಳು ತಟ್ಟುತ್ತಿದ್ದಳು. "ಯವ್ವಾ ಕಲ್ಲಪ್ಪಜ್ಜನ ಮನಿಗೆ ಸಿಂದಗಿ ಮಾಸ್ತರ ಬರ್ತಾರಂತ ಹೌದೇನ?" ಎಂದು ಕೇಳಿದಳು. ಗಂಗಮ್ಮ "ಇರಬೌದು. ನಿಂಗ್ಯಾಕ ಬೇಕು ಇಲ್ಲದ್ದ ಹಕೀಕತ್ತು, ದನದಕ್ಯಾಗ ಭಾಂಡೇವ ಅದಾವ.ಬೆಳಗಿಡು" ಎಂದಳು.
ಕೈ ಭಾಂಡೆ ಬೆಳಗುತ್ತಿದ್ದರೂ ತಲ್ಯಾಗ ಬ್ಯಾರೆ ವಿಚಾರ ಹರಿದಾಡಾಕತ್ತಿದ್ದವು. ಸಿಂದಗಿ ಮಾಸ್ತರಂದ್ರ ಸಾಲ್ಯಾಗ ಎಲ್ಲಾರೂ ಹೆದರಿ ನಡಗ್ತಾರ.ಯಾವಾಗಲೂ ಬಡಿಗಿ ಹಿಡಕೊಂಡ ಹೊಡ್ಯಾಕ ಬರ್ತಾರವ್ರು.ಅವ್ವಗ ಏನೂ ಗೊತ್ತಾಗುದಿಲ್ಲ, ಸಾಲಿಗೆ ಬಂದ್ರ ತಿಳಿತೈತಿ.ಇಂಥಾವ್ರು ನಂಮನಿ ಮುಂದ ಕಲ್ಲಪ್ಪಜ್ಜನ ಮನ್ಯಾಗ ಬಂದ ಇದ್ರ ನಾ ಇಲ್ಲೆ ಹೆಂಗ ಇರಬೇಕು? ಕಲ್ಲಪ್ಪಜ್ಜನರ ಹೊಸಾ ಮನಿಗೆ ಯಾಕ್ ಹೋಗ್ಬೇಕಿತ್ತು? ಅದನ ಬಾಡಿಗಿ ಕೊಟ್ಟ್ ಅವಾ ಇಲ್ಲೆ ಇರಬೇಕಿತ್ತು. ಬಾಡಗಿ ಕೊಟ್ರೂ ಸಿಂದಗಿ ಮಾಸ್ತರ ಬದ್ಲಿ, ಗೀತಾ ಅಕ್ಕೋರಗ್ಯದ್ರೂ ಕೊಡಬೇಕಿತ್ತು ಎಂದುಕೊಂಡಳು. ಅವಳು ಭಾಂಡೆ ಬೆಳಗಿ ಜೋಡಿಸಿಟ್ಟಾಗ ಗಂಗವ್ವ ರೊಟ್ಟಿ ಬಡಿಯಾಕತ್ತಿದ್ದಳು. "ಉಮ್ಮಿ ನಿಂಗ್ಯಾ ಎನ್ ಮಾಡಾಕತ್ತಾನ ನೋಡ ಒಂದೀಟು.ಅಮ್ಮನ ಹಂತೇಕ ಇದ್ದ." ಎಂದಳು.ಪಡಸಾಲೆಯ ಕಟ್ಟಿಮ್ಯಾಲೆ ಉಮ್ಮಿಯ ಅಜ್ಜಿ ನಿಂಗವ್ವ ದೀಡ ವರ್ಷದ ಬಸ್ಯಾನ ಆಡಸ್ಕೊಂಡು ಕೂತಿತ್ತು. ಉಮಾ ಪಾಟೀಚೀಲಾ ತಗದು, ಪುಸ್ತಕ ಬಿಡಿಸಿ ಬರೆಯಲು ಶುರು ಮಾಡಿದಳು. ಸ್ಸ್ವಲ್ಪ ಹೊತ್ತಿಗೆ ನಿಂಗ್ಯಾ ಬಂದು ಪೆನ್ ಕಸಿಯಲು ಬಂದ. "ಹಿಡಕೋಳಬೇ ಇವನ್ನ , ನನಗ ಹೋಮರ್ಕ್ ಮಾಡೋದೈತಿ". ಎಪ್ಪತ್ತು ವರ್ಷದ ನಿಂಗವ್ವನಿಗೆ ಬಸ್ಯಾನನ್ನು ಕೂತಲ್ಲೇ ಆಡಿಸುವ ಶಕ್ತಿ ಮಾತ್ರ ಇತ್ತು. ಉಮಾ ಹೆಂಗೋ ಮಾಡಿ ಅಭ್ಯಾಸ ಮುಗಿಸಿದಳು.

ಮರುದಿನ ಸಾಲಿಂದ ಬಂದ ಉಮಾ ಕಲ್ಲಪ್ಪಜ್ಜನ ಮನಿ ಬಾಗಿಲು ತೆಗೆದಿದ್ದನ್ನ ನೋಡಿದಳು. ಸಿಂದಗಿ ಮಾಸ್ತರು ಇವತ್ತು ಪೂರಾ ದಿನಾ ಸಾಲ್ಯಾಗ ಇದ್ದರಲ್ಲಾ, ಮತ್ತ ಯಾರು ಕಲ್ಲಪ್ಪಜ್ಜನ ಮನಿಗೆ ಬಂದಾರ? ಎಂದುಕೊಂಡು ಕುತೂಹಲದಿಂದ ನೋಡಿದಳು. ಬೆಳ್ಳಗಿನ ಉದ್ದಜಡೆಯ ಒಬ್ಬ ಅಕ್ಕಾರು ಮತ್ತು ಒಬ್ಬ ಅಣ್ಣಾರು ಓಡಾಡುತ್ತಿದ್ದನ್ನು ನೋಡಿ ಉಮ್ಮಿಗೆ ಸಿಂದಗಿ ಮಾಸ್ತರ ಅಲ್ಲದೇ ಬ್ಯಾರೇ ಯಾರೂ ಬಂದಾರಂತ ಖುಶಿಯಾಯ್ತು ಮತ್ತು ಕುತೂಹಲ ಕೂಡ. "ಕಲ್ಲಪ್ಪಜ್ಜನ ಮನಿಗೆ ಯಾರ ಬಂದಾರಬೇ?" ಅವ್ವನನ್ನು ಕೇಳಿದಳು. "ಯಾರೋ ಬ್ಯಾಂಕಿನವರಂತ" ಎಂದಳಾಕೆ.

ಎರಡು ದಿನ ಉಮ್ಮಿ ಕೌತುಕದಿಂದ ಆ ಮನೆ ಕಡೆ ಕದ್ದು ಮುಚ್ಚಿ ನೋಡತಿದ್ಲು. ಆ ದಿವಸ ಕಲ್ಲಪ್ಪಜ್ಜ ಬ್ಯಾಂಕಿನ ಅಕ್ಕಾವರ ಮನ್ಯಾಗ ಕೂತು ಗಂಗಮ್ಮಗ ಹೇಳಿ ಕಳುಹಿಸಿದ. ಹಾಲ ಕಾಸಾಕ ಇಟ್ಟಿದ್ದ ಗಂಗಮ್ಮ, ಒಲ್ಯಾನ ಕೆಂಡ ಕಡಿಮೆ ಮಾಡಿ ನಿಂಗಮ್ಮಗ ನೋಡ್ಲಿಕ್ಕೆ ಹೇಳಿ, ಬ್ಯಾಂಕಿನವರ ಮನೆಗೆ ಹೋದಳು. ಉಮಾ ಅವರವ್ವನ ಜೊತೆ ಓಡಿ ಅವಳ ಹಿಂದೆ ಅಡಗಿ ಕೊಂಡು ನಿಂತು ಮಾತು ಕೇಳಿಸಿಕೊಂಡಳು. ಕಲ್ಲಪ್ಪಜ್ಜ ಗಂಗವ್ವಗ " ಗಂಗವ್ವ, ಇವರು ಸುಧಾ ಅಕ್ಕಾವರಂತ, ಪ್ಯಾಟಿಯವರು. ಇವರಿಗೆ ದಿವ್ಸಾಒಂದೀಟ ಬಂದು, ಮನಿಕೆಲಸ ಮಾಡಿ ಕೊಟ್ಟರ ಅನುಕೂಲಾಕ್ಕೈತಿ.ಬರಾಕ ಆಗ್ತೈತೇನು? ನೀನು ಒಕ್ಕಲತಿ ಅದಿ, ಇಂಥಾ ಕೆಲ್ಸಾ ಮಾಡುದಿಲ್ಲಾ ಅಂತ ನನಗ ಗೊತ್ತೈತಿ, ಆದರೂ ಮನಿ ಎದರಿಗೆ ಇರತೀದಿ ಅಂತ ಕೇಳಾಕತ್ತಿನಿ.ಬೇಕಂದ್ರ ನಿನ್ನ ಹಿರ್ಯಾಗ ಒಂದ ಮಾತ ಕೇಳಿ ಹೇಳು" ಅಂದ. " ನೀ ಹೇಳಿದಿ ಅಂದ್ರ, ಅಂವಾ ಬ್ಯಾಡ ಅನ್ನೋದಿಲ್ಲಪ್ಪ. ಹ್ವಾರೆ ಮಾಡಾಕ ಎನ್ ಅಡ್ಡಿಇಲ್ಲ. ಆದ್ರ ನಂಗ ನನ್ನ ಮನಿ ಹ್ವಾರೆನ ಜಾಸ್ತಿ ಇರತೈತಿ. ನಂಗ ಆದಾಗ ಬಂದ ನಾ ಮಾಡತೇನಿ. ಇಲ್ಲಾಂದ್ರ ದಿವ್ಸಾ ಉಮ್ಮಿಗೆ ಕಳಸಿಕೊಡತೇನಿ" ಎಂದಳು. "ಆಗ ಬಹುದು" ಎಂದ ಕಲ್ಲಪ್ಪಜ್ಜ. "ಸಣ್ಣ ಹುಡುಗಿಯಾಗ್ತಾಳಲ್ಲ" ಎಂದು ಸುಧಾ ಅಕ್ಕಾರು ಸಂಶಯ ಪಟ್ಟರು. "ಸಣ್ಣಕ್ಯಾದ್ರೂ ಬೇಶ ಕೆಲ್ಸಾ ಮಾಡತಾಳ್ರಿ" ಎಂದಳು ಗಂಗಮ್ಮ. "ಹಂಗಲ್ಲ ನಾ ಹೇಳಿದ್ದು. ಸಣ್ಣ ಹುಡುಗಿ ಕಡೆ ಕೆಲ್ಸಾ ಮಾಡಿಸಿಕೊಳೋದು ನನಗ ಸರಿಯೆನಿಸುವದಿಲ್ಲಾ ಅಂತ" ಎಂದಳು ಸುಧಾ. "ಹಂಗ ತಿಳಕೋಬ್ಯಾಡ್ರಿ, ನಮ್ಮನ್ಯಾಗೂ ಮ್ಯಾಲಿನ ಕೆಲ್ಸ ಎಲ್ಲಾ ಇಕೀನ ಮಾಡತಾಳ್ರಿ.ನಮ್ಮ ಮನ್ಯಾಗ ಮಾಡು ಹಂಗ ನಿಮ್ಮಲ್ಯೂ ಮಾಡತಾಳ" ಅಂದಳು ಗಂಗಮ್ಮ. ಪಗಾರದ ವಿಷಯಾ ಮಾತಾಡಿದ ಮ್ಯಾಲೆ ಕಲ್ಲಪ್ಪಜ್ಜ "ಹಂಗ್ಯಾಕ ಅಡಗಿಕೊಂಡು ನಿಂತೀದಿ, ಬಾ ಇಲ್ಲೆ" ಎಂದು ಉಮ್ಮಿಗೆ ಕರೆದ. ನಾಚಿ ನೀರಾದ ಉಮ್ಮಿ, ಎರಡು ನಿಮಿಷ ಮುಖ ತೋರಿಸಿ, ಮನೆಗೆ ಓಡಿಹೋದಳು.


ಸುಧಾಳೊಂದಿಗೆ ಮದುವೆಯಾಗಿ ವರ್ಷದೊಳಗೇ ಅಶೋಕನಿಗೆ ಪ್ರಮೋಷನ್ ಜೊತೆಗೆ ಹಳ್ಳಿಗೆ ವರ್ಗವಾದಾಗ ಕಳವಳಗೊಂಡಿದ್ದ. ಹತ್ತಿರದ ಶಹರದಲ್ಲಿ ಮನೆ ಮಾಡಿ ಹಳ್ಳಿಗೆ ದಿನಾ ಹೋಗಿ ಬಂದು ಮಾಡುವದಾಗಿ ಹೇಳಿದ.ಸುಧಾಳೇ ಬೇಡವೆಂದಳು.ಓಡಾಡುವದರಲ್ಲಿ ಟೈಮ್ ಹೋಗಿ, ಅನವಶ್ಯಕ ಸುಸ್ತಾಗುವದಲ್ಲದೇ ತನಗೂ ಹಳ್ಳಿ ಜೀವನವನ್ನು ಹತ್ತಿರದಿಂದ ನೋಡುವ ಆಸೆಯೆಂದಳು. ಚಿಕ್ಕಂದಿನಲ್ಲಿಯ ಅಜ್ಜಿ ಮನೆಯನ್ನು ಬಿಟ್ಟರೆ ಹಳ್ಳಿಯ ಸಂಪರ್ಕವೇ ಕಡಿಮೆ ಹಾಗು ಸದ್ಯಕ್ಕೆ ತಾವಿಬ್ಬರೆ ಇದ್ದುದರಿಂದ ಹಳ್ಳಿಯಲ್ಲಿರಲು ಅಭ್ಯಂತರವೇನಿಲ್ಲ ಎಂದಿದ್ದಳು.ಹೀಗಾಗಿ ಅವರು ಹಳ್ಳಿಯ ಕಲ್ಲಪ್ಪನವರ ಈ ಮನೆಗೆ ಶಿಫ್ಟ ಆಗಿದ್ದರು.
ಮರುದಿನ ಶಾಲೆಯ ನಂತರ ಉಮ್ಮಿ ಬ್ಯಾಂಕ್ ಅಕ್ಕಾರ ಮನೆಗೆ ಹೋದಳು. ನಿನ್ನ ಹೆಸರೇನೆಂದು ಕೇಳಿದಾಗ "ಉಮಾ" ಎಂದು ಹೇಳಿದಳು.ಮೊದ ಮೊದಲು ನಾಚಿಕೆಯಾದರೂ ಅವರು ಸ್ನೇಹದಿಂದ ಮಾತನಾಡಿಸುತ್ತಿದ್ದರಿಂದ ಸಲಿಗೆ ಬೆಳೆತು.ಮೊದಲ ಬಾರಿಗೆ ಸುಧಾ ಉಮ್ಮಿಗೆ "ಉಮಾ" ಎಂದು ಕರೆದಾಗೆ ತುಂಬಾ ಸಂತೋಷವಾಗಿತ್ತು. ಶಾಲೆಯ ಹಾಜರಿ ಪುಸ್ತಕದಿಂದ ಕರೆಯುವಾಗ ಮಾತ್ರ "ಉಮಾ" ಎಂದು ಕರೆಯುತ್ತಿದ್ದರೇ ಹೊರತು ಎಲ್ಲರಿಗೂ ಅವಳು ಉಮ್ಮಿಯೇ ಆಗಿದ್ದಳು.
ಪಾದರಸದಂತೆ ಚುರುಕಾಗಿ ಪುಟಪುಟನೇ ಮನೆತುಂಬಾ ಓಡಾಡಿ ಕೆಲಸಮಾಡುವ ಈ ಪುಟ್ಟ ಹುಡುಗಿಯ ಮೇಲೆ ಸುಧಾಗೂ ಅಕ್ಕರೆ.ಇಡೀ ದಿನ ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದರಿಂದ ಈ ಹುಡುಗಿಂದಲೇ ಒಂದಿಷ್ಟು ಕಂಪನಿಯಾಗುತ್ತಿತ್ತು. ಹೇಳಿದ ಕೆಸವನ್ನಷ್ಟೇ ಅಲ್ಲದೇ ಬೇಡ ಬೇಡವೆಂದರೂ ಉಮ್ಮಿ ಎಲ್ಲ ಕೆಲಸಕ್ಕೂ ಹಾಜರ್. ಒಂದು ಬಾರಿ ಶಹರದ ಅಮ್ಮನ ಮನೆಗೆ ಹೋದಾಗ ಚಿಕ್ಕತ್ತೆಯ ಮನೆಗೂ ಹೋಗಿ ಅವಳ ಮಗಳ ಹಳೆಯ ಆದರೂ ಚೆನ್ನಾಗಿರುವ ಬಟ್ಟೆಯನ್ನು ಉಮ್ಮಿಗಾಗಿ ತಂದು ಕೊಟ್ಟಳು. ತನ್ನ ವಯಸ್ಸಿಗೆ ಅಷ್ಟೊಂದು ಎತ್ತರವಲ್ಲ ಉಮ್ಮಿಗೆ ಆ ಬಟ್ಟೆಗಳೆಲ್ಲ ಉದ್ದುದ ! ಉದ್ದಾಗಿದ್ದರೂ ಉಮ್ಮಿ ಅವುಗಳನ್ನು ತೊಟ್ಟು ತುಂಬಾ ಖುಶಿಪಟ್ಟಳು.ಅರ್ಜಂಟಾಗಿ ಸಾಮಾನು ಬೇಕಾದಾಗ ಸುಧಾ ಉಮ್ಮಿಯನ್ನು ಕರೆದು ಅಂಗಡಿಗೆ ಕಳುಹಿಸುವಳು. ಸಕ್ಕರೆಯೋ, ನಿಂಬೆಹಣ್ಣೋ, ಬಟ್ಟೆ ಸೋಪು ಹೀಗೆ ಏನಾದರೊಂದು ಇದ್ದೇ ಇರುತ್ತಿತ್ತು. ದುಡ್ಡು ಎಣಿಸಿ ವಾಪಸ್ಸು ತರಲು ಉಮ್ಮಿ ಕಷ್ಟಪಡುವದನ್ನು ನೋಡಿ, ಸುಧಾ ಅವಳಿಗೆ ಕೂಡಿಸುವದು ಮತ್ತು ಕಳೆಯುವದನ್ನು ಹೇಳಿಕೊಡತೊಡಗಿದಳು.ಹಾಗೆಯೇ ಅವಳಿಗೆ ತನ್ನ ಮನೆಗೇ ಬಂದು ಹೋಮ್‌ವರ್ಕ್ ಮಾಡಲು ಹೇಳಿದಳು. "ನಂಗ ಇಂಗ್ಲೀಷು ಕಲಿಸ್ರಿ ಅಕ್ಕಾರ" ಎಂದು ಉಮ್ಮಿ ಪುಸ್ತಕ ತೆಗೆದುಕೊಂಡು ಬರುತ್ತಿದ್ದಳು. ಮೊದಮೊದಲು ಕಷ್ಟವಾದರೂ ಉಮ್ಮಿ, ಇತ್ತೀಚೆಗೆ ಗಣೀತವನ್ನೂ, ಇಂಗ್ಲೀಷನ್ನೂ ಬೇಗ ಬೇಗ ಅರ್ಥಮಾಡಿಕೊಳ್ಳುತ್ತಿದ್ದಳು. ತರಕಾರಿ ಹೆಚ್ಚುತ್ತಲೋ, ಬಿಡಿಸುತ್ತಲೋ ಸುಧಾ ಅವಳಿಗೆ ಕಲಿಸುತ್ತಿದ್ದಳು.

ಒಂದು ದಿವಸ ಸುಧಾ "ಉಮಾ ನೀ ದೊಡ್ಡಕ್ಯಾದ ಮ್ಯಾಲೆ ಏನ ಮಾಡ್ತಿ" ಎಂದು ಕೇಳಿದ್ದಕ್ಕೆ ಅವಳು ಥಟ್ಟನೇ " ನಾ ದೊಡ್ದಕ್ಯಾದ ಮ್ಯಾಲೆ ನಮ್ಮವ್ವ ನನ್ನ ಮದ್ವಿ ಮಾಡ್ತಾಳಂತ್ರಿ" ಎಂದಳು. ಸುಧಾಗೆ ಅಚ್ಚರಿಯಾತು. "ಹಂಗಲ್ಲ. ದೊಡ್ಡಕ್ಯಾದ ಮ್ಯಾಲೆ ಮದವಿ ಬಿಟ್ಟು, ಏನು ಕೆಲಸಾಮಾಡಬೇಕಂತ ನಿನಗ ಅನಸ್ತದ ? ಏನ ಕಲಿಬೇಕಂತ ನಿನಗ ಅನಿಸ್ತದ" ಎಂದಳು. ಉಮ್ಮಿಗೆ ಒಮ್ಮೆಲೆ ಏನೂ ಹೊಳೆಯಲಿಲ್ಲ. ಸ್ವಲ್ಪ ವಿಚಾರ ಮಾಡಿ, ನಂತರ ಖುಶಿಂದ "ನನಗೆ ಗೀತಾ ಅಕ್ಕೊರಗತೆ ಟೀಚರ ಆಗಬೇಕನಿಸ್ತೈತ್ರಿ. ನಮ್ಮ ಗಿರಿಜಕ್ಕ ಇಲ್ರೀ ಆಕೀನೂ . . ." "ಯಾರು ಗಿರಿಜಕ್ಕ ಅಂದ್ರ ?" , "ಗಿರಿಜಕ್ಕ ಅಂದ್ರ, ನಮ್ಮ ಚಿಗವ್ವನ ಮಗಳ್ರಿ. ಆಕಿನೂ ಟೀಚರ ಆಗಬೇಕಂತ ಪ್ಯಾಟೀಗೆ ಹೋಕ್ಕೇನಿ ಅಂತಿದ್ಳರಿ. ಚಿಗಪ್ಪ ಕಳಸಲಿಲ್ರಿ" ಎಂದಳು. "ಈಗ ಎಲ್ಲಿದ್ದಾಳ ನಿಮ್ಮ ಗಿರಿಜಕ್ಕ? " ಎಂದು ಸುಧಾ ಕೇಳಿದಾಗ, ಉ" " ಈಗ ಇಲ್ಲೆ ಬಂದಾಳರಿ, ಆಕಿಗೆ ಕೂಸು ಹುಟ್ಟೇತಲ್ರಿ ಅದಕ್ಕ. ಇಲ್ಲಾಂದ್ರ ಶಿರೂರನ್ಯಾಗ ಇರ್ತಾಳ್ರಿ ಮಾವನ ಕೂಡ" ಎಂದಳು.

ಈಗೀಗ ಹಳ್ಳಿಯ ವಿಷಯಗಳು ಸುಧಾಗೆ ಅರ್ಥವಾಗುತ್ತಿದ್ದವು.ಉಮಾಗೆ ಓದಲು ಬೇಕಾದ ವಾತಾವರಣವೇ ಇಲ್ಲ. ಅವಳು ಬಸ್ಯಾನನ್ನು ನೋಡಿಕೊಳ್ಳಬೇಕು, ಮನೆಗೆಲಸ ಮಾಡಬೇಕು. ಇಂಥಹುದರಲ್ಲಿ ಓದುವ ಉಮೇದು ಆಸಕ್ತಿ ಉಳಿದೀತೆ? ಬೆಳೆದೀತೆ? ಇಂಥಹ ಉಮೆಯರು ಊರ ತುಂಬಾ ಇದ್ದಾರೆ. ಆರು ವರ್ಷದ ಪುಟ್ಟ ಮಕ್ಕಳು, ಒಂದು, ಎರಡು ವರ್ಷದ ಮಕ್ಕಳನ್ನು ಸೊಂಟದಲ್ಲಿ ಹೊತ್ತುಕೊಂಡೇ ಆಟವಾಡುತ್ತವೆ. ಉತ್ತು ಬಿತ್ತು ಬೆಳೆದು ದೇಶದ ಹೊಟ್ಟೆ ತುಂಬಿಸುವ ರೈತರಿಗೆ ದುಡಿಯಲು ಎಷ್ಟು ಕೈಗಳಾದರೂ ಸಾಲದು. ಮಕ್ಕಳ ಮೇಲೂ ಈ ಕೆಲಸ ಬರುವದು. ಶಹರಗಳಲ್ಲಿ ಎಲ್ಲ ಸೌಕರ್ಯಗಳಿದ್ದರೂ ಮಕ್ಕಳ ಚಂಚಲ ಮನಸ್ಸಿಗೆ ಓದುವದರ ಕಡೆ ಗಮನ ಕೊಡುವಂತೆ ಮಾಡಲು ಪಾಲಕರಿಗೆ ಕಷ್ಟವಾಗುತ್ತದೆ, ಅಂಥಹುದರಲ್ಲಿ, ಹಳ್ಳಿಯ ಮಕ್ಕಳಿಗೆ ಇಂತಹ ವಾತಾವರಣದಲ್ಲಿ ಅದು ಅಷ್ಟು ಸುಲಭವೆ? ಮದುವೆಯೊಂದಲ್ಲದೇ ಬೇರೇನಾದರೂ ಕಲಿಯಬಹುದು, ಮಾಡಬಹುದೆಂಬ ವಿಚಾರಗಳೂ ಹೆಣ್ಣು ಮಕ್ಕಳಲ್ಲಿ ಬರುವದಿಲ್ಲ. ಒಂದು ಬಾರಿ ಹೀಗೆ ಮಾತನಾಡುತ್ತಿದ್ದಾಗ ಯಾರೋ ಹೇಳಿದ್ದ ನೆನಪು. ರೈತ ಮಕ್ಕಳೆಲ್ಲರೂ ಓದಿ ಓದಿ ಶಹರ ಸೇರಿದರೆ, ಹೊಲದಲ್ಲಿ ದುಡಿದು ಬೆಳೆ ಬೆಳೆಯುವರು ಯಾರು? ಅವರಿಗೆ ಅದು ಅವಶ್ಯವಿಲ್ಲವೆಂಬ ಅವಿವೇಕದ ಮಾತು. ಓದಿ ಎಲ್ಲರೂ ಶಹರ ಸೇರಬೇಕೆಂದೇನಿಲ್ಲ, ಆದರೆ ಮಕ್ಕಳಿಗೆ ಓದಿ, ತಿಳುವಳಿಕೆ ಕೊಟ್ಟು, ಅವರಿಗೇ ತಮ್ಮ ಆಸಕ್ತಿಯನ್ನರಿತು ಉದ್ಯೋಗವನ್ನು ಆರಿಸಿಕೊಳ್ಳುವ ಹಕ್ಕಾದರೂ ದೊರೆಯಬೇಕಲ್ಲವೆ? ಮೂಲ ಶಿಕ್ಸ್ಯಣವನ್ನಾದರೂ ಕೊಟ್ಟರೆ ಜೀವನಕ್ಕೂ, ಬೇಸಾಯಕ್ಕೂ ಒಳ್ಲೆಯದಲ್ಲವೆ?ನಿತ್ಯ ಜೀವನದ ಸರಿ ತಪ್ಪುಗಳನ್ನು ನಿರ್ಧರಿಸಲು ಅನುಕೂಲವಲ್ಲವೆ? ಅಲ್ಲದೇ ಯೋಗ್ಯರಾದ ಜನ ಪ್ರತಿನಿಧಿಗಳನ್ನು ಚುನಾಸುವ ಜಾಗೃತಿ ದೊರೆಯುವದಲ್ಲವೆ? ಬೇಸಾಯದಲ್ಲೂ ಮಣ್ಣಿನ ಗುಣವನ್ನು ಅಭ್ಯಸಿ ಹೊಸ ಹೊಸ ತಂತ್ರಜ್ಞಾನವನ್ನು ಉಪಯೋಗಿಸಿ ಇಳುವರಿ ಹೆಚ್ಚಿಸಬಹುದಲ್ಲವೆ? ಇವುಗಳ ಜ್ಞಾನ ಕಲಿತರೆ ಮಾತ್ರ ಸಾಧ್ಯ.

ತಿಂಗಳುಗಳು ಕಳೆದು ವರ್ಷವಾಗಿದ್ದೇ ತಿಳಿಯಲಿಲ್ಲ. ಉಮ್ಮಿ ಅ ಕೆಲವು ತಿಂಗಳುಗಳಲ್ಲಿ ಚೆನ್ನಾಗಿ ಓದಲು ಬರೆಯಲು ಕಲಿತಿದ್ದಳು.ಅಶೋಕ ಹಲವು ತಿಂಗಳಿನಿಂದ ಶಹರಕ್ಕೆ ವರ್ಗ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದರಿಂದ ಕೊನೆಗೂ ಆರ್ಡರ ಬಂತು. ಬೇರೆ ಊರಿಗೆ ಹೋಗುತ್ತಿರುವದಾಗಿ ಸುಧಾ ಉಮ್ಮಿಗೆ ತಿಳಿಸಿದಾಗ, ಬೇಜಾರಾಗಿ ಮುಖ ಸಣ್ಣಗೆ ಮಾಡಿಕೊಂಡಳು.ಹೊರಡುವ ಎರಡು ದಿನ ಮೊದಲಿನಿಂದ ಎಲ್ಲಾ ಪ್ಯಾಕಿಂಗಿಗೂ ಉಮ್ಮಿ ಬಂದು ಮೇಲಿನ ಎಲ್ಲ ಕೆಲಸಗಳಿಗೂ ಸಹಾಯ ಮಾಡಿದಳು. ಸುಧಾ ಅವಳಿಗೆಂದು ಆ ಊರಿನಲ್ಲಿದ್ದ ಏಕೈಕ ಜವಳಿ ಅಂಗಡಿಂದ ಒಂದು ಗುಲಾಬಿ ಬಣ್ಣದ ಫ್ರಾಕನ್ನು ತಂದಳು. ಹೊರಡುವ ದಿನ ಮನೆಯ ಸಾಮಾನನ್ನೆಲ್ಲ ಟೆಂಪೋಗೆ ತುಂಬಿ ಕಳುಸಿದ ಮೇಲೆ, ಅಶೋಕ ಸುಧಾಗೆ ಬಸ್ ಸ್ಟಾಂಡಿಗೆ ಬರಲು ತಿಳಿಸಿ, ಬೀಗ ಜಡಿದು ಕಲ್ಲಪ್ಪಜ್ಜನ ಮನೆಗೆ ಕೊಡಲು ಹೋದ. ಪರ್ಸ್ ಏರಿಸಿಕೊಂಡು ಒಂದು ಕೈಯಲ್ಲಿ ಹ್ಯಾಂಡ್ ಬ್ಯಾಗನ್ನು , ಇನ್ನೊಂದರಲ್ಲಿ ಉಮಾಳ ಅಂಗಿರುವ ಪ್ಲಾಸ್ಟಿಕ್ ಚೀಲವನ್ನು ಹಿಡಿದು ಸುಧಾ ಉಮಾಳ ಬಾಗಿಲಿಗೇ ಹೋಗಿ ಅವಳನ್ನು ಕರೆದಳು. ಓಡಿ ಬಂದ ಉಮಾಳ ಕೈಗೆ ಅಂಗಿಯ ಚೀಲವನ್ನು ಕೊಟ್ಟು "ಇದ್ರಾಗ ನಿನಗ ಹೊಸಾ ಅಂಗಿ ಅದ. ನಾನು ಹೋಗಿಬರ್ತೀನಿ, ನೀನು ಸರಿಯಾಗಿ ಓದಿ ಕಾಲೇಜಿಗೆ ಹೋಗು" ಎಂದು ಅವಳ ಗಲ್ಲ ಸವರಿದಳು. ಗಂಗಮ್ಮನೂ ಹೊರಗೆ ಬಂದು "ಒಳಗ ಬರ್ರಿ ಅಕ್ಕಾರ, ಚಾ ಕುಡದ ಹೋಗಿರಂತ" ಎಂದು ಕರೆದಳು. "ಇಲ್ಲಾ ಗಂಗವ್ವ, ನನಗ ಬಸ್ಸಿಗೆ ಹೊತ್ತಾಗ್ಯದ. ನಾ ಹೋಗಬೇಕು. ಉಮಾಗ ಭೆಟ್ಟಿಯಾಗ್ಲಿಕ್ಕೆ ಬಂದಿದ್ದೆ. ಹುಡುಗಿ ಶಾಣ್ಯಾ ಇದ್ದಾಳ. ಆಕೀಗೆ ಸರಿಯಾಗಿ ಓದಸು. ಓದಿದರ ಈಗಿನ ಕಾಲದಾಗ ಭಾಳ ಛುಲೋ" ಎಂದು ಹೇಳಿ ಹೊರಟಳು. ಒಂದಷ್ಟು ದೂರ ಹೋಗಿ,ತಿರುಗಿ ನೋಡಿದಾಗ ರೋಡಿನ ಮಧ್ಯದಲ್ಲಿ ಅವಳು ಕೋಟ್ಟಿದ್ದ ಅಂಗಿ ಚೀಲವನ್ನು ಹಿಡಿದು ಸುಧಾ ಹೋಗುವದನ್ನೇ ನೋಡುತ್ತಿದ್ದ ಉಮಾ ಕಂಡಳು. ಎಷ್ಟೊಂದು ಹಚ್ಚಿಕೊಂಡುಬಿಟ್ಟಿದೆ ಹುಡುಗಿ. ದೇವರೆ ಈ ಹುಡುಗಿಗೆ ಒಳ್ಳೇದು ಮಾಡು. ಇನ್ನೊಂದು ಗಿರಿಜಾ ಮಾಡಬೇಡ ಎಂದುಕೊಂಡಳು.
ಅಕ್ಕಾರು ಹೋಗುತ್ತಿದ್ದುದನ್ನೇ ನೋಡುತ್ತ ನಿಂತಿದ್ದ ಉಮಾಗೆ ಹೊಸ ಅಂಗಿಯ ಖುಶಿಗಿಂತ ಅವರು ಹೋಗುತ್ತಿದ್ದ ದುಃಖವೇ ಹೆಚ್ಚಾಗಿತ್ತು.ಅವಳ ಎರಡೂ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು.

No comments: